Saturday, July 11, 2009

ಗಣಿ ಗಡಿ ಜಂಟಿ ಸಮೀಕ್ಷೆಗೆ ಮಹೂರ್ತ ಫಿಕ್ಸ್/Ballari Reddy

ಬೆಂಗಳೂರು, ಜು. 10 : ಗಣಿಗಾರಿಕೆ ಸಂಬಂಧಿಸಿದಂತೆ ರೆಡ್ಡಿಗಳು ಹಾಗೂ ದಿವಾಕರ್ ಬಾಬು ನಡುವಿನ ತಿಕ್ಕಾಟದ ಬೆನ್ನಲ್ಲೇ ಅಕ್ರಮ ಗಣಿಗಾರಿಕೆಯಿಂದ ವಿವಾದಕ್ಕೆ ಒಳಗಾಗಿರುವ ಬಳ್ಳಾರಿ ಮೀಸಲು ಅರಣ್ಯದ ಕರ್ನಾಟಕ, ಆಂಧ್ರಪ್ರದೇಶ ಅಂತಾರಾಜ್ಯ ಗಡಿಯಲ್ಲಿ ಇದೇ 15 ಮತ್ತು 16 ರಂದು ಜಂಟಿ ಸಮೀಕ್ಷೆ ನಡೆಸುವುದಾಗಿ ರಾಜ್ಯ ಅರಣ್ಯ ಇಲಾಖೆ ತಿಳಿಸಿದೆ.

ಸಚಿವ ಜಿ ಜನಾರ್ದನರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಬಿ ಶ್ರೀರಾಮುಲು ಒಡೆತನದ ಒಬಳಾಪುರಂ ಮೈನಿಂಗ್ ಕಂಪನಿಯು ಆಂಧ್ರಪ್ರದೇಶದಲ್ಲಿ ಗುತ್ತಿಗೆ ಪಡೆದು ರಾಜ್ಯದ ಅಕ್ರಮ ಗಣಿಗಾರಿಕೆ ನಡೆಸಿರುವ ಕುರಿತ ಆರೋಪದ ಸತ್ಯಾಸತ್ಯತೆ ಅರಿಯಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಭಾರತೀಯ ಸರ್ವೇ ಇಲಾಖೆ ಮತ್ತು ಭಾರತೀಯ ಗಣಿ ನಿರ್ದೇಶನಾಯಲಗಳು ಜಂಟಿಯಾಗಿ ಈ ಪ್ರಕ್ರಿಯೆ ನಡೆಸುತ್ತವೆ.

ಬಳ್ಳಾರಿ ಜಿಲ್ಲೆಯ ಸಂಡೂರಿನ ತುಮಟಿ ಗ್ರಾಮದಲ್ಲಿ ಗಣಿ ಗುತ್ತಿಗೆ ಹೊಂದಿರುವ ಟಿ ನಾರಾಯಣರೆಡ್ಡಿ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಎಂಟು ವಾರಗಳ ಒಳಗಾಗಿ ಅಂತಾರಾಜ್ಯ ಗಡಿಯಲ್ಲಿರುವ ವಿವಾದಿತ ಗಣಿ ಪ್ರದೇಶದ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಜೂನ್ 8 ರಂದು ಆದೇಶ ಹೊರಡಿಸಿತ್ತು.

No comments:

Post a Comment